ಬಂಕೇಶ
ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನ (ಒಂದನೆಯ ಅಮೋಘವರ್ಷ ಕ್ರಿ.ಶ. ಸು 814-878) ನೆಚ್ಚಿನ ಮಾಂಡಲಿಕ ಮತ್ತು ದಂಡನಾಯಕ. ಚೆಲ್ಲಕೇತನ ಮುಕುಲಕುಲ ವಂಶದವನು. ನಿಡುಗುಂದ ಶಾಸನದ ಪ್ರಕಾರ ಇವನು ಬನವಾಸಿ 12000, ಬೆಳ್ವಲ 300, ಕುಂದರ್ಗೆ 70, ಕುಂದೂರು 500 ಮತ್ತು ಪುಲಿಗೆರೆ 300, ಈ ಪ್ರಾಂತ್ಯಗಳ ಒಡೆಯನಾಗಿದ್ದ. ದಕ್ಷಿಣದಲ್ಲಿ ಗಂಗ ಮನೆತನದ ನೀತಿಮಾರ್ಗ ರಣವಿಕ್ರಮನ ನೇತೃತ್ವದಲ್ಲಿ ರಾಷ್ಟ್ರಕೂಟರ ಆಧಿಪತ್ಯವನ್ನು ಕಿತ್ತೊಗೆಯಲು ಯತ್ನಿಸಿತು. ರಾಷ್ಟ್ರಕೂಟ ಚಕ್ರವರ್ತಿ ದಂಡನಾಯಕ ಬಂಕೆಯನ ನೇತೃತ್ವದಲ್ಲಿ ಸೈನ್ಯವನ್ನು ಗಂಗವಾಡಿಯ ಮೇಲೆ ಕಳಿಸಿದ. ಬಂಕೆಯ ಗಂಗದೊರೆಯನ್ನು ಸೋಲಿಸಿದುದಲ್ಲದೆ ತುಮಕೂರು ಹತ್ತಿರದ ಕೈದಾಳ ದುರ್ಗವನ್ನು ವಶಮಾಡಿಕೊಂಡ ಕೂಡ. ಅನಂತರ ಕಾವೇರಿ ನದಿಯನ್ನು ದಾಟಿ ತಲವನಪುರವನ್ನು (ಈಗಿನ ತಲಕಾಡು) ವಶಕ್ಕೆ ತೆಗೆದುಕೊಂಡ. ಗಂಗರಾಜ್ಯ ಪೂರ್ಣ ವಶವಾಗುವ ಮುನ್ನವೇ ಚಕ್ರವರ್ತಿಯ ಅಣತಿಯಂತೆ ಹಿಂದಿರುಗಿ ರಾಜ್ಯದ ಬಂಡಾಯವನ್ನು ಹತ್ತಿಕ್ಕಿ, ಓಡಿಹೋಗಿದ್ದ ಇಮ್ಮಡಿ ಕೃಷ್ಣನನ್ನು ಹಿಡಿದು ತಂದು ಚಕ್ರವರ್ತಿಗೆ ಒಪ್ಪಿಸಿದ. ಸಂತುಷ್ಟನಾದ ಚಕ್ರವರ್ತಿ ಬಂಕೇಶನ ಹೆಸರಿನಲ್ಲಿ ಬಂಕಾಪುರ ಎಂಬ ನಗರವನ್ನು ಕಟ್ಟಿಸಿದನೆಂದು ಗುಣಭದ್ರಾಚಾರ್ಯರ ಉತ್ತರಪುರಾಣದಿಂದ ತಿಳಿದುಬರುತ್ತದೆ. ಬಂಕೇಶ ಮದ್ದೂರು ತಾಲ್ಲೂಕಿನ ಆತಕೂರು ಗ್ರಾಮದಲ್ಲಿ ಮತ್ತು ನಾಂದೇಡ ಜಿಲ್ಲೆಯ ಕಂಧಾರದಲ್ಲೂ ಚಲ್ಲೇಶ್ವರ ದೇವಾಲಯ ಮತ್ತು ಬಂಕೇಶ್ವರ ಚಲ್ಲೇಶ್ವರ ದೇವಾಲಯಗಳನ್ನು ಕಟ್ಟಿಸಿದುದಾಗಿ ತಿಳಿದು ಬಂದಿದೆ. ಬಂಕಾಪುರದಲ್ಲಿ ಬಂಕೆಯನ ಮಗ ಮೋಕಾದಿತ್ಯನ ಕಾಲದಲ್ಲಿಯೇ ಗುಣಭದ್ರನ ಶಿಷ್ಯ ಲೋಕಸೇನಮುನಿ ಉತ್ತರಪುರಾಣದ ಪೂಜಾಮಹೋತ್ಸವವನ್ನು ಮಾಡಿದನೆಂದೂ ಲೋಕಾದಿತ್ಯನ ಮಗ ಎರಡನೆಯ ಬಂಕೇಯ (925-26) ಬನವಾಸಿ 12000 ಇಬ್ಭಾಗ ಮಾಡಿ ಒಂದನ್ನು ರಾಷ್ಟ್ರಕೂಟ ವಂಶದ ಶಂಕರಗಂಡ ದೊರೆಯ ಆಡಳಿತಕ್ಕೆ ಕೊಟ್ಟನೆಂದೂ ಹಾನಗಲ್ ತಾಲ್ಲೂಕಿನ ಲಕ್ಷ್ಮೀಪುರದ ಶಾಸನದಿಂದ ತಿಳಿದು ಬಂದಿದೆ.
(ಎನ್.ಎನ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ